ಬುಡ್ಡಪಕ್ಕೆ
ಸೈಪ್ರಿನಿಫಾರ್ಮೀಸ್ ಗಣದ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಮೀನು. ಬಾಳೆ, ಕಾಟ್ಲಾ, ಬಿಳಿಮೀನು ಮುಂತಾದವುಗಳ ಹತ್ತಿರ ಸಂಬಂಧಿ. ಬಾರ್ಬಸ್ ಟಿಕ್ಟೊ ಇದರ ಶಾಸ್ತ್ರೀಯ ಹೆಸರು.  ಇದು ಸಣ್ಣಗಾತ್ರದ್ದು. 6-13 ಸೆಂಮೀ ವರೆಗೆ ಬೆಳೆಯುತ್ತದೆ. ಕಿವಿರು ಸೀಳಿನ ಮುಂದಕ್ಕೆ ಅಂದರೆ 4-6 ಹುರುಪೆಗಳಿಂದ ಮುಂದಕ್ಕೆ ಪಾಶ್ರ್ವರೇಖೆ ಕಾಣಿಸದು. ಬೆನ್ನಿನ ಈಜುರೆಕ್ಕೆಯಲ್ಲಿ ಒಂದು ಬಲವಾದ, ಹರಿತವಾದ ಮುಳ್ಳಿದೆ. ಮೀನಿನ ಬಣ್ಣ ಬೆಳ್ಳಿ. ಪಾಶ್ರ್ವರೇಖೆಯ ಮೇಲೆ ಎರಡು ಕರಿಯ ಚುಕ್ಕೆಗಳಿವೆ; ಒಂದು ಕಿವಿರುಗಳ ಹಿಂದೆ ಇರುವ ಮೂರನೆಯ ಹುರುಪಿನ ಮೇಲೆ; ಇನ್ನೊಂದು ಆಸನದ ಈಜು ರೆಕ್ಕೆಯ ಹಿಂದೆ ಅಂದರೆ 19-21 ಹುರುಪೆಗಳಿರುವ ಸ್ಥಾನದಲ್ಲಿ.

ಈ ಮೀನು ಕೆರೆಗಳಲ್ಲಿ ಹೇರಳವಾಗಿ ಸಿಗುತ್ತದೆ. ಬೀಸು ಬಲೆಗಳು ಮತ್ತು ಎಳೆಯಾಲೀ ಬಲೆಗಳನ್ನು ಬಳಸಿ ಇದನ್ನು ಹಿಡಿಯುವುದಿದೆ.  ಸಂತಾನೋತ್ಪತ್ತಿಯ ಶ್ರಾಯದಲ್ಲಿ ಗಂಡು ಮತ್ತು ಹೆಣ್ಣುಗಳಲ್ಲಿ ಬಣ್ಣ ಬದಲಾವಣೆಯುಂಟು.

ಇದು ಅತಿ ಚಿಕ್ಕಮೀನಾದರೂ ಬಹಳ ಉಪಯುಕ್ತವೆನಿಸಿದೆ. ನಾರುಹುಣ್ಣು ಬೇನೆ ಹರಡುವುದಕ್ಕೆ ಕಾರಣವಾದ ಸೈಕ್ಲಾಪ್ಸ್ ಎಂಬುದನ್ನು ಬುಡ್ಡಪಕ್ಕೆ ತಿಂದು ಹಾಕುವುದರ ಮೂಲಕ ರೋಗ ಪ್ರಸಾರವನ್ನು ತಡೆಗಟ್ಟುತ್ತದೆ.  ತತ್ಕಾರಣವಾಗಿ ಕರ್ನಾಟಕದ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನೀರು ಕುಡಿಯುವ ಬಾವಿಗಳಲ್ಲಿ ಹೆಚ್ಚಾಗಿ ಈ ಮೀನನ್ನು ಬಿಟ್ಟು ನಾರು ಹುಣ್ಣುರೋಗ ನಿವಾರಣೆ ಕೈಗೊಳ್ಳಲಾಗಿದೆ.
(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ